ಅಂಬಿ ನೆನಪಿಸುವ ಅಭಿ,ಕಂಟ್ರಿ ಪಿಸ್ತೂಲ್ ಕಾನ್ಸೆಪ್ಟ್ ಬ್ಯಾಡ್ ಮ್ಯಾನರ್ಸ್ ಹೈಲೈಟು.. ರೇಟಿಂಗ್ : 4/5 ****
Posted date: 25 Sat, Nov 2023 09:27:08 AM
ಸ್ಕ್ರೀನ್ ಮೇಲೆ ಯಾವುದೇ ಸೀನ್   ನೋಡ್ತಿದ್ದಂತೆ ಇದು ಪಕ್ಕಾ ಸೂರಿ ಸ್ಟೈಲ್  ಸಿನಿಮಾ ಅಂತ ಯಾರಾದರೂ  ಹೇಳಿಬಿಡುವಷ್ಟರ ಮಟ್ಟಿಗೆ ಬ್ಯಾಡ್ ಮ್ಯಾನರ್ಸ್ ಚಿತ್ರವನ್ನು ಸೂರಿ ನಿರೂಪಿಸಿದ್ದಾರೆ.  ಜೊತೆಗೆ ಸಾಕಷ್ಟು ಫ್ರೇಮ್ ಗಳಲ್ಲಿ  ಅಂಬಿಯನ್ನು ನೆನಪಿಸುವ ಅಭಿಷೇಕ್ ಅಂಬರೀಶ್ ಅಭಿನಯ ಚಿತ್ರದ ಪ್ಲಸ್ ಪಾಯಿಂಟ್.  ದೊಡ್ಡ ಮಟ್ಟದ ನಿರೀಕ್ಷೆಗಳ ಜೊತೆಗೆ, ಸಾಕಷ್ಟು ಗ್ಯಾಪ್ ತೆಗೆದುಕೊಂಡು ಅಭಿಷೇಕ್ ನಟಿಸಿರುವ ಚಿತ್ರವೂ ಇದಾಗಿರುವುದರಿಂದ ಚಿತ್ರದ ಮೇಲೆ ದೊಡ್ಡ ಮಟ್ಟದ ಕುತೂಹಲ, ನಿರೀಕ್ಷೆಯಿತ್ತು. ರೌಡಿಗ್ಯಾಂಗ್, ಪೊಲೀಸ್ ಕಾನ್ಸೆಪ್ಟ್ ಜೊತೆಗೆ  ಕಂಟ್ರಿಪಿಸ್ತೂಲ್ ಸುತ್ತ ನಡೆಯುವ ಕಥೆ ಇದಾಗಿದ್ದು, ಕಂಟ್ರಿ ಪಿಸ್ತೂಲ್ ದಂದೆ  ಬಗ್ಗೆ ಸೂರಿ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿಯೇ  ಚಿತ್ರದಲ್ಲಿ ತಂದಿದ್ದಾರೆ, ಅಭಿಷೇಕ್ ಅಂಬರೀಷ್ ಇಲ್ಲಿ ಇನ್ಸ್ಪೆಕ್ಟರ್ ರುದ್ರೇಶ್ ಆಗಿ ಪುಡಿ ರೌಡಿಗಳ ಹೆಡೆಮುರಿ ಕಟ್ಟಿದ್ದಾರೆ. ಎಂದಿನಂತೆ ಈ ಚಿತ್ರದಲ್ಲೂ ಸಹ ಫೀನಿಕ್ಸ್, ಮಗಾಯ್, ಡೈಮಂಡ್ ಭಂಡಾರಿ, ಕಟ್ಟೆ ಕೇಶವ, ಗುನ್ನಿಸ್ ರವಿ, ಶೋಲೆಬಾಬು ಹೀಗೆ ಚಿತ್ರವಿಚಿತ್ರ ಹೆಸರಿನ ಸೂರಿ ಕಾನ್ಸೆಪ್ಟ್ ಪಾತ್ರಗಳೇ ತುಂಬಿವೆ, ಸೂರಿ ಇಲ್ಲಿ ಬೂದಿಗುಡ್ಡ, ಗೋಡಾ, ಗಂಟೆಕಂಬ, ಹಂದಿಹಳ್ಳ, ನರಸಿಂಹಗುಡ್ಡ ಎನ್ನುವ ಬೆಟ್ಟಗುಡ್ಡದ ಸುತ್ತಲಿನ ಜಾಗಗಳಲ್ಲಿ ಕಂಟ್ರಿ ಪಿಸ್ತೂಲ್ ಹುಡುಕಾಟ  ನಡೆಸುತ್ತಾರೆ.‌
ಇನ್ನು ಅಭಿಷೇಕ್ ಅಂಬರೀಷ್ ಅವರಿಗೆ, ತಂದೆಯಂತೆಯೇ  ಪೊಲೀಸ್ ಅಧಿಕಾರಿಯ ಪಾತ್ರ ತುಂಬಾ ಚೆನ್ನಾಗಿ ಒಪ್ಪುತ್ತದೆ, ಅದಕ್ಕೆ ತಕ್ಕಂತೆ ಅವರ ಮೈಕಟ್ಟೂ ಇದ್ದು, ಆಕ್ಷನ್ ಸೀನ್‌ಗಳಲ್ಲಿ  ರೌಡಿಗಳನ್ನು ಚಿಂದಿ ಉಡಾಯಿಸಿದ್ದಾರೆ,  ಕೆಲವೊಂದು ಸೀನ್‌ಗಳಲ್ಲಿ  ರೆಬೆಲ್‌ಸ್ಟಾರ್ ಅಂಬರೀಷ್  ಅವರನ್ನೇ  ತೆರೆಮೇಲೆ  ನೋಡಿದಂತಾಗುತ್ತದೆ, ನಿರ್ದೇಶಕ ಸೂರಿ  ಸಾಕಷ್ಟು  ಎಫರ್ಟ್ ಹಾಕಿ ಅಭಿಷೇಕ್‌ರಲ್ಲಿದ್ದ  ಅಂಬಿಯನ್ನು ಹೊರ ತೆಗೆಯುವ ಪ್ರಯತ್ನ ಮಾಡಿದ್ದಾರೆ.
 
ಹಾಗೆಯೇ  ನಾಯಕಿಯಾಗಿ ಕಾಣಿಸಿಕೊಳ್ಳುವ ರಚಿತಾರಾಮ್ ಪಾತ್ರ ಬಂದಷ್ಟೇ ವೇಗವಾಗಿ ಮಾಯಾವಾಗುತ್ತದೆ. ಇನ್ನು ಪ್ರಿಯಾಂಕಾಕುಮಾರ್ ಅವರ ಪಾತ್ರವನ್ನು ಬೆಳೆಸಬಹುದಿತ್ತು.  
 
ಪಿಸ್ತೂಲ್ ಕಳೆದುಕೊಂಡ ಇನ್‌ಸ್ಪೆಕ್ಟರ್ ರುದ್ರ, ಕಂಟ್ರಿಪಿಸ್ತೂಲ್ ತಯಾರಕರನ್ನು ಹುಡುಕಿಕೊಂಡು  ಗೋಡಾಗೆ ಎಂಟ್ರಿ ಕೊಡುತ್ತಾನೆ. ಆಲ್ಲಿದ್ದ  ಆಡೋ ಹುಡುಗರ ಕೈಗೆಲ್ಲ  ಪಿಸ್ತೂಲ್ ಸಿಕ್ಕಿ ಕಾನೂನು ಸುವ್ಯಸ್ಥೆಯೇ ಹಾಳಾಗಿರುತ್ತದೆ. ಮಗಾಯ್ ಹಾಗೂ  ಫೀನಿಕ್ಸ್ ,  ನಕಲಿ ಪಿಸ್ತೂಲ್  ತಯಾರಿಸಿ ಎಲ್ಕರ ಕೈಗೆ ಸಿಗುವಂತೆ ಮಾಡಿರುತ್ತಾರೆ. ಗೋಡಾಕ್ಕೆ ಬರುವ ರುದ್ರ, ಈ ಪುಡಿ ರೌಡಿಗಳ  ಹಿಂದೆ  ಏಕೆ ಬೀಳುತ್ತಾನೆ,  ಅದಕ್ಕೆ ಕಾರಣವಾದರೂ ಏನು  ಅನ್ನೋದೇ  ಬ್ಯಾಡ್ ಮ್ಯಾನರ‍್ಸ್ ಚಿತ್ರದ  ಕಾನ್ಸೆಪ್ಟ್. ಕಂಟ್ರಿ ಪಿಸ್ತೂಲ್ ರಿವರ್ಸ್ ಫೈರ್ ಆಗೋದು, ನಾಯಕನ ಕಿವಿಮಾತುಗಳೇ ವಿಲನ್ ಗೆ ಪ್ರೇರಣೆಯಾಗೋದು ಇದೆಲ್ಲ ಚಿತ್ರಕಥೆಗೆ  ಪೂರಕವಾಗಿ ಮೂಡಿಬಂದಿವೆ.
ನಾಯಕನ ತಾಯಿ ಹಾಗೂ  ಸರಕಾರಿಶಾಲೆ ಟೀಚರ್ ಪಾತ್ರದಲ್ಲಿ ಹಿರಿಯನಟಿ ತಾರಾ, ಹಿರಿಯ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಶರತ್ ಲೋಹಿತಾಶ್ವ ನಟನೆ ಇಷ್ಟವಾಗುತ್ತದೆ.  ಮಗಾಯ್ ಪಾತ್ರಧಾರಿ ರೋಚಿತ್, ಕೇಶಪ್ಪ ಪಾತ್ರಧಾರಿ ತ್ರಿವಿಕ್ರಮ್, ಆಂಧ್ರ ಪೊಲೀಸ್ ಆಗಿ ಶೋಭರಾಜ್, ಪ್ರಶಾಂತ್ ಸಿದ್ಧಿ, ಪೂರ್ಣಚಂದ್ರ, ನಿರಂಜನ್, ಸಚ್ಚಿದಾನಂದ  ಹೀಗೆ  ಹಲವಾರು ಕಲಾವಿದರು ತಮಗೆ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. 
   
ಬಿಜಿಎಂ  ಚಿತ್ರದ ಹೈಲೈಟ್. ಟಗರು ನಂತರ ಸೂರಿ, ಚರಣ್‌ರಾಜ್ ಕಾಂಬಿನೇಶನ್ ಮತ್ತೊಮ್ಮೆ ಮ್ಯಾಜಿಕ್ ಮಾಡಿದೆ. ಜೊತೆಗೆ  ಶೇಖರ್‌ ಅವರ  ಕ್ಯಾಮೆರಾ ಕೈಚಳಕ, ಸಣ್ಣ ಸಣ್ಣ ಫ್ರೇಮ್ ಕಟ್ಟಿಕೊಡಲು ಅವರು ಹಾಕಿರುವ ಎಫರ್ಟ್ ಎದ್ದುಕಾಣುತ್ತದೆ. ಆಕ್ಷನ್ ಪ್ರಿಯರಿಗೆ ಮತ್ತು ಅಭಿಷೇಕ್  ಫ್ಯಾನ್ಸ್ ಗೆ  ಈ ಚಿತ್ರ ಬಾಡೂಟವಾಗಿದೆ. ಬ್ಯಾಡ್ ಮ್ಯಾನರ್ಸ್ ಒಂದು ಫೀಲ್ ಗುಡ್ ಮೂವೀ ಅಂತ ಹೇಳಬಹುದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed